ಕೇರ್ ಥಾಮಸ್
1595-1640. ಆಂಗ್ಲಕವಿ. ಹುಟ್ಟಿದ್ದು ವೆಸ್ಟ್ ವಿಕ್‍ಹ್ಯಾಮ್‍ನಲ್ಲಿ. ವಕೀಲನ ಮಗನಾದ ಈತ ಆಕ್ಸ್‍ಫರ್ಡಿನ ಮರ್‍ಟನ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಸರ್ ಡಡ್ಲಿ ಕಾರ್ಲ್‍ಟನ್ನನ ಕಾರ್ಯದರ್ಶಿಯಾಗಿ ವೆನಿಸ್ ಮತ್ತು ಹೇಗ್ ನಗರಗಳಲ್ಲಿದ್ದ. ಒಂದನೆ ಚಾಲ್ರ್ಸ್ ದೊರೆಯ ಅನುಗ್ರಹಕ್ಕೆ ಪಾತ್ರನಾಗಿ ರಾಜಸಭಾಸದನಾದ. ಕವಿ ಬೆನ್ ಜಾನ್ಸನ್ ಮತ್ತು ಸರ್ ಜಾನ್‍ಸಕ್ ಲಿಂಗರ ಸ್ನೇಹವನ್ನೀತ ಗಳಿಸಿದ್ದ. ಈತನ ಮೇಲೆ ಡನ್ ಕವಿಯ ಪ್ರಭಾವ ಅಪಾರವಾಗಿತ್ತು. ಡನ್ ಕವಿಯ ಮೇಲೆ ಈತ ಒಂದು ಸತ್ತ್ವಪೂರ್ಣವಾದ ಚರಮಗೀತೆಯನ್ನು ಬರೆದಿದ್ದಾನೆ. ಈ ಗೀತೆಯನ್ನು ಆ ಕಾಲಕ್ಕೆ ಡನ್ ಕವಿಯ ಮೇಲೆ ಬಂದು ಅತ್ಯುತ್ತಮವಾದ ವಿಮರ್ಶೆಯೆಂದು ಪರಿಗಣಿಸಿದ್ದಾರೆ. ಈತನನ್ನು ಪ್ರಥಮ ದರ್ಜೆಯ ಆಸ್ಥಾನಕವಿಯೆಂದೂ ರಾಜಜೀವನ ಹಾಗೂ ಸ್ಥೈರ್ಯ ಮತ್ತು ಶೌರ್ಯಗಳಿಂದ ಕೂಡಿದ ಪದ್ಯಗಳನ್ನು ಇವನಷ್ಟು ಸರಳ ಸುಂದರವಾಗಿ ವರ್ಣಿಸಿರುವವರು ಬೇರೊಬ್ಬರಿಲ್ಲವೆಂದೂ ಭಾವಿಸಲಾಗಿದೆ. ದಿ ರ್ಯಾಪ್ಚರ್ ಎಂಬ ಪ್ರೇಮಗೀತೆ, ಕೋಲಮ್ ಬ್ರಿಟಾನಿಕಮ್ (1634), ಎಂಬ ಮೊಗವಾಡ ನಾಟಕ (ಮಾಸ್ಕ್) ಈತನ ಮುಖ್ಯ ಕೃತಿಗಳು. ಈತನ ಪದ್ಯಗಳು ಬಹುತೇಕ ಭಾವಗೀತೆಗಳಾಗಿವೆ. ಅವನ್ನು ಈತನ ಕಾಲಾನಂತರ ಸಂಗ್ರಹಿಸಿ ಪ್ರಕಟಿಸಲಾಗಿದೆ. ಹಿ ದಟ್ ಲವ್ಸ್ ಎ ರೋಸಿ ಚೀಕ್-ಎಂಬ ಇವನ ಗೀತೆ ಬಹು ಪ್ರಖ್ಯಾತವಾದುದು.    		
	 (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ